ಪಿಡಿಒ ಅಮಾನವೀಯತೆಗೆ ಗ್ರಂಥಾಲಯದ ಮೇಲ್ವಿಚಾರಕ ಬಲಿ! ಮೂರು ತಿಂಗಳ ಸಂಬಳ ನಿರಾಕರಿಸಿ, ಕೆಲಸದಿಂದ ವಜಾ: ಮನನೊಂದು ರಾಮಚಂದ್ರಪ್ಪ ಆತ್ಮಹತ್ಯೆ!

ತ್ಯಾಮಗೊಂಡ್ಲು ಹೋಬಳಿ: 25 ವರ್ಷ ಸೇವೆ ಸಲ್ಲಿಸಿದ್ದರೂ ಪಿಡಿಒ ನಿರ್ಲಕ್ಷ್ಯ, ಬಡ ಕುಟುಂಬಕ್ಕೆ ನ್ಯಾಯ ಯಾವಾಗ?

ದುಡಿದವರ ಬದುಕನ್ನು ಬರ್ಬಾದ್ ಮಾಡಿದ ಅಮಾನವೀಯ ಘಟನೆಯೊಂದು ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಕಳಲುಘಟ್ಟ ಗ್ರಾಮ ಪಂಚಾಯತಿ ಪಿಡಿಒ ಶ್ರೀಮತಿ ಗೀತಾಮಣಿ ಅವರ ನಿರ್ದಯಿ ವರ್ತನೆಗೆ ಬೇಸತ್ತ ಗ್ರಂಥಾಲಯದ ಮೇಲ್ವಿಚಾರಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಕುಟುಂಬಕ್ಕೆ ಆಸರೆಯಾಗಿದ್ದ ಮನೆಯ ಮುಖ್ಯಸ್ಥನ ಸಾವಿನಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಸಂಬಳಕ್ಕಾಗಿ ಗೋಗರೆದರೂ ಕರುಣೆ ಇಲ್ಲ!

ಆತ್ಮಹತ್ಯೆಗೆ ಶರಣಾದವರು ಗೋವೇನಹಳ್ಳಿ ನಿವಾಸಿ ರಾಮಚಂದ್ರಪ್ಪ (58). ಇವರು ಕಳಲುಘಟ್ಟ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಕಳೆದ 25 ವರ್ಷಗಳಿಂದ ಮೇಲ್ವಿಚಾರಕರಾಗಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಮೂಲಗಳ ಪ್ರಕಾರ, ಪಿಡಿಒ ಗೀತಾಮಣಿ ಅವರು ರಾಮಚಂದ್ರಪ್ಪನವರಿಗೆ ಕಳೆದ ಮೂರು ತಿಂಗಳಿನಿಂದ ವೇತನವನ್ನೇ ನೀಡಿರಲಿಲ್ಲ. ಬಡತನದಲ್ಲಿದ್ದ ರಾಮಚಂದ್ರಪ್ಪ ವೇತನಕ್ಕಾಗಿ ಪಿಡಿಒ ಬಳಿ ಪದೇ ಪದೇ ಮನವಿ ಮಾಡಿಕೊಂಡರೂ, ಆ ಅಧಿಕಾರಿ ಕಿಂಚಿತ್ತೂ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

ಕೊನೆಗೆ ಕೆಲಸದಿಂದಲೂ ವಜಾ!

ಸಂಬಳ ಕೊಡದಿರುವುದಲ್ಲದೆ, ಇತ್ತೀಚೆಗೆ ರಾಮಚಂದ್ರಪ್ಪ ಅವರನ್ನು ಇದ್ದಕ್ಕಿದ್ದಂತೆ ಕೆಲಸದಿಂದಲೂ ವಜಾಗೊಳಿಸಲಾಗಿತ್ತು! ಸಂಬಳವಿಲ್ಲದೆ, ಇದ್ದ ಕೆಲಸವನ್ನೂ ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾದಾಗ, ದಿಕ್ಕು ತೋಚದಾದ ರಾಮಚಂದ್ರಪ್ಪ ಅವರು ಕೃಷಿ ಬಳಕೆಯ ಕೀಟನಾಶಕ ಔಷಧಿಯನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ.

ಪಿಡಿಒ ವಿರುದ್ಧ ದೂರು ದಾಖಲು

ಈ ಘಟನೆ ಸಂಬಂಧ ಮೃತರ ಮೊಮ್ಮಗ ಕಾಂತರಾಜು ಅವರು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಡಿಒ ಗೀತಾಮಣಿ ಅವರ ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಯೇ ತಮ್ಮ ಅಜ್ಜನ ಸಾವಿಗೆ ಕಾರಣ ಎಂದು ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಿಡಿಒ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪಿಡಿಒ ಅಧಿಕಾರಿಯ ಕ್ರಮದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *