
“ಸಾರ್ವಜನಿಕ ರಂಗದಲ್ಲಿರುವ ರಾಜಕಾರಣಿಗಳು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ, ಕರ್ನಾಟಕದ 66 ಮಂದಿ ವಿಧಾನಸಭಾ ಸದಸ್ಯರು (ಶಾಸಕರು) ಈವರೆಗೂ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಈ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಲೇ, ಸ್ವತಃ ಶಾಸಕರೇ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆಸ್ತಿ ವಿವರ ಸಲ್ಲಿಸದ ಈ ಶಾಸಕರ ಪಟ್ಟಿಯನ್ನು ಲೋಕಾಯುಕ್ತ ಸಂಸ್ಥೆಯು ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿ ಯಾವೆಲ್ಲಾ ಶಾಸಕರಿದ್ದಾರೆ ಎಂಬ ವಿವರ ಇಲ್ಲಿದೆ.”
ಬೆಂಗಳೂರು (ನವೆಂಬರ್ 06): ಲೋಕಾಯುಕ್ತ (Karnataka Lokayukta) ಕಾಯ್ದೆಯ ಸೆಕ್ಷನ್ 22(1) ಮತ್ತು 22(2) ರ ಪ್ರಕಾರ, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಆದರೆ 6 ಮಂದಿ ಸಚಿವರು, 66 ಶಾಸಕರು ಮತ್ತು 28 ಮಂದಿ ವಿಧಾನಪರಿಷತ್ ಸದಸ್ಯರು (ಎಂ.ಎಲ್.ಸಿ.ಗಳು) 2024-25ನೇ ಸಾಲಿನ ಆಸ್ತಿ ವಿವರವನ್ನು ಇದುವರೆಗೂ ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ.
ಆಸ್ತಿ ವಿವರ ಸಲ್ಲಿಸದ ಸಚಿವರ ಹೆಸರುಗಳು
- ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವ
- ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
- ಬಿ.ಝಡ್. ಜಮೀರ್ ಅಹ್ಮದ್ ಖಾನ್-, ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತ ಸಚಿವ
- ರಹೀಮ್ ಖಾನ್- ಹಜ್, ಪೌರಾಡಳಿತ ಸಚಿವ
- ಕೆ. ವೆಂಕಟೇಶ್- ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ
ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಸಂಸ್ಥೆಯು ಆಸ್ತಿ ವಿವರ ಸಲ್ಲಿಸದ ಈ ಶಾಸಕರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಡಳಿತಾರೂಢ ಕಾಂಗ್ರೆಸ್, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸೇರಿದ ಒಟ್ಟು 66 ಶಾಸಕರು ಇದ್ದಾರೆ.
