ನೆಲಮಂಗಲ ತಾಲೂಕು: ಹಿಂದೂ ಆಚಾರ, ವಿಚಾರ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ನೆನಪಿಸುವ ಪವಿತ್ರ ಆಚರಣೆಯಾದ ದಸರಾವನ್ನು ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ಅದ್ದೂರಿಯಾಗಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಮಹಿಳೆಯರು ಚನ್ನಕೇಶವ ಸ್ವಾಮಿ ಹಾಗೂ ಪಟ್ಟದ ಗೊಂಬೆಗಳಿಗೆ ಪೂಜೆ ಸಲ್ಲಿಸಿ, ಸಾಂಸ್ಕೃತಿಕ ಸಮಾರಂಭದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಗ್ರಾಮದ ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಪಟ್ಟದ ಗೊಂಬೆಗಳ ಪೂಜೆ, ಅಕ್ಷರಾಭ್ಯಾಸ ಮತ್ತು ನಾನಾ ಪೂಜಾ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ. ತಿಮ್ಮರಾಜು, ದಸರಾ ಹಿಂದೂಗಳ ಆಚರಣೆಗೆ ಪ್ರೇರಣೆ ನೀಡುವ ಹಬ್ಬವಾಗಿದೆ ಎಂದು ತಿಳಿಸಿದರು.
ಪಕ್ಷಾತೀತವಾಗಿ ಒಂಬತ್ತು ದೇವರ ಆರಾಧನೆ
ಬೂದಿಹಾಳ್ ಗ್ರಾಮಕ್ಕೆ ದಸರಾ ವಿಶೇಷ ಹಬ್ಬವಾಗಿದ್ದು, ಗ್ರಾಮದಲ್ಲಿ ಒಂಬತ್ತು ದೇವರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮದ ಜನರು ಪಕ್ಷಾತೀತವಾಗಿ ನಾನಾ ಸಮಾರಂಭಗಳಲ್ಲಿ ಭಾಗವಹಿಸಿ, ಹಬ್ಬವನ್ನು ಅದ್ದೂರಿಯಾಗಿ ನಡೆಸುತ್ತಾರೆ ಎಂದು ತಿಮ್ಮರಾಜು ಹೇಳಿದರು.
ಬೂದಿಹಾಳ್ ಪಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಲಕ್ಷ್ಮೀವೆಂಕಟೇಶ್ ಮಾತನಾಡಿ, ಗ್ರಾಮೀಣ ಜನರಿಗೆ ಆಯುಧಪೂಜೆ, ವಿಜಯದಶಮಿ ಮತ್ತು ಸರಸ್ವತಿ ಪೂಜಾ ಸಮಾರಂಭಗಳು ವಿಶೇಷವಾದವು. ದಸರಾ ಹಬ್ಬದ ದಿನ ಗ್ರಾಮದ ಮಹಿಳೆಯರು ಗೊಂಬೆಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಾರೆ ಎಂದು ವಿವರಿಸಿದರು.
50ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ
ಸರಸ್ವತಿ ಪೂಜೆಯ ಹಿನ್ನೆಲೆಯಲ್ಲಿ, ಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿದ್ಯಾರಂಭದ ಶುಭಕಾರ್ಯ ನಡೆಯಿತು.
ಸಮಾರಂಭದಲ್ಲಿ ಬೂದಿಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಂಜುನಾಥ್‌ಗೌಡ, ಕುವೆಂಪು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಟರಾಜು, ಮುಖಂಡರಾದ ಮಂಜುನಾಥ್ ಗೌಡ, ವಕೀಲ ಮೋಹನ್ ಕುಮಾರ್, ಆನಂದ್, ಮಧುಕುಮಾರ್, ವೇಣು, ಉಮೇಶ್, ಬೂದಿಹಾಳ್ ಕಿಟ್ಟಿ ಮಾರಪ್ಪ, ಅರ್ಚಕ ರಾಜಣ್ಣ ಹಾಗೂ ಮಹಿಳಾ ಸಮಾಜದ ಟ್ರಸ್ಟಿ ಸುಮಿತ್ರ ನಟರಾಜು, ವೇದರಾಜು , ಸುಧಾ ಮೂರ್ತಿ, ಸುಮಿತ್ರಾ ಕಿಟ್ಟಿ, ಮಂಜುಳಾ, ಸಿದ್ದಲಕ್ಷ್ಮಿ, ಚೈತ್ರ, ಶೋಭಾ, ನಿರ್ಮಲ ಪ್ರಕಾಶ್, ಹಾಗೂ ಬೂದಿಹಾಳ ಮಹಿಳಾ ಸಮಾಜ ಇತರರು ಉಪಸ್ಥಿತರಿದ್ದರು.