ನೆಲಮಂಗಲ: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಪ್ರತಿ ನೀಡಲು ಹೋಗಿದ್ದ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಪಿಡಿಓ ಸೇರಿದಂತೆ ಆರು ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಹಾಗೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ದಿನಾಂಕ 25/09/2025 ರಂದು ಯುವರಾಜ್ ಅವರ ಪತ್ನಿ, ನ್ಯಾಯಾಲಯದ ಪಿಸಿಆರ್ (PCR) ದೂರನ್ನು ಠಾಣೆಗೆ ಸಲ್ಲಿಸಿದ್ದಾರೆ. ಈ ದೂರಿನನ್ವಯ ಕುಲುವನಹಳ್ಳಿ ಗ್ರಾಮ ಪಂಚಾಯತಿಯ ಪಿ.ಡಿ.ಓ ಮೋಹನ್ ಕುಮಾರ್ ಸೇರಿದಂತೆ ಒಟ್ಟು ಆರು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕಚೇರಿಯಲ್ಲಿ ಹಲ್ಲೆ ಮತ್ತು ದುರ್ನಡತೆ
ದೂರಿನ ಪ್ರಕಾರ, ದಿನಾಂಕ 06/12/2024 ರಂದು ದೂರುದಾರರ ಅತ್ತಿಗೆ ಮಹಾಲಕ್ಷ್ಮೀ ರವರು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ ಪ್ರತಿಯನ್ನು ನೀಡಲು ಕುಲುವನಹಳ್ಳಿ ಗ್ರಾಮ ಪಂಚಾಯತಿಗೆ ಹೋಗಿದ್ದರು. ಈ ವೇಳೆ ಪಿ.ಡಿ.ಓ ಮೋಹನ್ ಕುಮಾರ್ ಮತ್ತು ಇತರೆ ಸಿಬ್ಬಂದಿಗಳು ಮಹಾಲಕ್ಷ್ಮೀ ರವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.
ಇದನ್ನು ಪ್ರಶ್ನೆ ಮಾಡಲು ಹೋದಾಗ, ಮಹಾಲಕ್ಷ್ಮೀ ಅವರ ಸಹೋದರ ಯುವರಾಜ್ ಮತ್ತು ಅವರ ಅತ್ತೆ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಪಿ.ಡಿ.ಓ ಮೋಹನ್ ಕುಮಾರ್, ಪವನ್ ಕುಮಾರ್ (ಕ್ಲರ್ಕ್), ದಿಲೀಪ್ ಕುಮಾರ್, ಶಿವಕುಮಾರ ಸ್ವಾಮಿ (ಸ್ವಚ್ಛಗಾರರು), ರಂಗನಾಥ ಕೆ.ಎಂ (ಕರವಸೂಲಿಗಾರ), ಮತ್ತು ಧನಂಜಯ ಕುಮಾರ್ ಎಂ (ಗ್ರೇಡ್-1 ಕಾರ್ಯದರ್ಶಿ) ಸೇರಿ ಏಳು ಮಂದಿ ಕೊಲೆ ಮಾಡಲು ಯತ್ನಿಸಿ ಯುವರಾಜ್, ಮಹಾಲಕ್ಷ್ಮೀ ಮತ್ತು ಅತ್ತೆಯವರ ತಲೆ, ಕೈ ಹಾಗೂ ಮುಖದ ಭಾಗಗಳಿಗೆ ಹೊಡೆದಿದ್ದಾರೆ.
ಲೈಂಗಿಕ ದೌರ್ಜನ್ಯದ ಆರೋಪ
ದೂರಿನಲ್ಲಿ ಅತಿ ಗಂಭೀರವಾಗಿ ಉಲ್ಲೇಖಿಸಿರುವ ಅಂಶವೆಂದರೆ, ಪಿ.ಡಿ.ಓ ಮೋಹನ್ ಕುಮಾರ್ ರವರು ಮಹಾಲಕ್ಷ್ಮೀ ರವರು ಹೆಣ್ಣು ಮಗಳು ಎಂದು ಕೂಡ ನೋಡದೆ, ಅವಾಚ್ಯ ಪದಗಳಿಂದ ಬೈದು, ದುರುದ್ದೇಶದಿಂದ ದೈಹಿಕವಾಗಿ ಹಾಗೂ ಲೈಂಗಿಕ ಸ್ಪರ್ಶದ ಖಾಸಗಿ ಭಾಗಗಳಿಗೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ಆಸ್ಪತ್ರೆಯಲ್ಲಿ ಪೊಲೀಸರ ಕ್ರೌರ್ಯದ ಆರೋಪ
ಹಲ್ಲೆಯಿಂದ ಗಾಯಗೊಂಡ ಕುಟುಂಬ ಸದಸ್ಯರು ಮಧ್ಯಾಹ್ನ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ದೂರುದಾರರು ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿಗಳ ಮೇಲೆ ಆಘಾತಕಾರಿ ಆರೋಪ ಮಾಡಿದ್ದಾರೆ.
”ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಸೇರಿ ನಮ್ಮನ್ನು ಒಳರೋಗಿಗಳು ಎಂದು ದಾಖಲು ಮಾಡದೆ, ನನ್ನ ಗಂಡನಾದ ಯುವರಾಜ್ ರವರನ್ನು ಆಸ್ಪತ್ರೆಯ ಹಾಸಿಗೆಯಿಂದಲೇ ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಆ ಸಮಯದಲ್ಲಿ ತೀವ್ರವಾಗಿ ಗಾಯಗಳಾಗಿದ್ದರೂ, ಪೊಲೀಸರು ಕ್ರೂರವಾಗಿ ನಡೆದುಕೊಂಡರು” ಎಂದು ದೂರುದಾರರು ತಿಳಿಸಿದ್ದಾರೆ.
ಪೊಲೀಸರ ಬೆದರಿಕೆಯಿಂದ ಹಾಗೂ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ದೂರು ನೀಡಲು ವಿಳಂಬವಾಯಿತು ಎಂದು ಮಹಿಳೆ ಹೇಳಿದ್ದಾರೆ. ಈ ದೂರಿನ ಮೇರೆಗೆ ಪಿಡಿಓ ಮೋಹನ್ ಕುಮಾರ್ ಮತ್ತು ಇತರೆ ಆರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
