ನೆಲಮಂಗಲ: ಮಳೆಗಾಲ ಬಂತೆಂದರೆ ಸಾಕು, ನೆಲಮಂಗಲ ತಾಲೂಕಿನ ಪ್ರಮುಖ ರಸ್ತೆಯಾದ ದಾಬಸ್‌ಪೇಟೆ-ಶಿವಗಂಗೆ ಮಾರ್ಗದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡು ಮಿನಿ ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆ ವರ್ಷಗಳಿಂದ ಇದ್ದರೂ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪೂರ್ಣ ರಸ್ತೆ ನಿರ್ಮಾಣವೇ ಸಮಸ್ಯೆ ಮೂಲ:
ಹಲವು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಯಿತು. ಮಾಜಿ ಮತ್ತು ಹಾಲಿ ಶಾಸಕರುಗಳ ಸಮ್ಮುಖದಲ್ಲಿ ಗುದ್ದಲಿ ಪೂಜೆ ನಡೆದು, ಕಾಮಗಾರಿಯೂ ಪ್ರಾರಂಭವಾಗಿತ್ತು. ಆದರೆ, ಶಿವಗಂಗೆ (ಕೆ.ಇ.ಬಿ) ಸ್ಟೇಷನ್ ಮತ್ತು ವೀರಸಾಗರ ರಸ್ತೆಯ ಮುಂಭಾಗದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಉದ್ದೇಶಪೂರ್ವಕವಾಗಿ ಅಪೂರ್ಣವಾಗಿ ಬಿಟ್ಟಿದ್ದಾರೆ.
ಈ ರಸ್ತೆಯು ಪ್ರಮುಖ ಸಂಪರ್ಕ ಮಾರ್ಗವಾಗಿರುವುದರಿಂದ, ಮಳೆ ಬಂದಾಗ ನೀರು ಸರಿಯಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ. ಸೂಕ್ತ ಚರಂಡಿ ಇಲ್ಲದ ಕಾರಣ, ರಸ್ತೆಯ ಇಕ್ಕೆಲಗಳಲ್ಲೂ ನೀರು ನಿಂತು ದೊಡ್ಡ ಕೆಸರು ಗದ್ದೆಯಂತಾಗುತ್ತದೆ. ಲಾರಿ, ಟ್ರಾಕ್ಟರ್, ಕಾರು, ಮತ್ತು ದ್ವಿಚಕ್ರ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ. ಪಾದಚಾರಿಗಳಂತೂ ಸಂಪೂರ್ಣ ತೊಂದರೆ ಅನುಭವಿಸುತ್ತಿದ್ದಾರೆ.
ವ್ಯಾಪಾರಿಗಳಿಗೂ ಸಂಕಷ್ಟ:
ರಸ್ತೆ ಪಕ್ಕದಲ್ಲಿರುವ ಅಂಗಡಿಗಳು, ಆಟೋ ನಿಲ್ದಾಣ ಮತ್ತು ಇತರೆ ವ್ಯಾಪಾರ ಕೇಂದ್ರಗಳು ಮಳೆಯಿಂದ ಹೆಚ್ಚು ಬಾಧಿತವಾಗಿವೆ. ರಸ್ತೆಯಲ್ಲೇ ನೀರು ನಿಂತು ನಿಂತ ಸ್ಥಳದಲ್ಲಿ ಕೆಸರು ತುಂಬಿಕೊಳ್ಳುವುದರಿಂದ ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ರಸ್ತೆಯನ್ನು ವೈಜ್ಞಾನಿಕವಾಗಿ ವಿಸ್ತರಿಸಿ, ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕಿದೆ