ಪ್ರತಿಯೊಬ್ಬರು ಸ್ನೇಹ, ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದಿರುವ ಪ್ರವಾದಿ ಮುಹಮದ್ ಪೈಗಂಬರ್ ಅವರ ಸಂದೇಶಗಳು ಮಾನವರ ಏಳಿಗೆಗೆ ಸಹಕಾರಿಯಾಗಿವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಅವರು ನರೇಗಲ್ಲ ಪಟ್ಟಣದ ಮುಸ್ಲಿಂ ನೌ ಜವಾನ್‌ ಟ್ರಸ್ಟ್‌ ಕಮೀಟಿ ಮರ್ಕಜ್‌ ಹಾಗೂ ಅಂಜುಮನ್‌ ಇಸ್ಲಾಂ ಕಮೀಟಿ ವತಿಯಿಂದ ಸ್ಥಳೀಯ ಶಾದಿ ಮಹಲ್‌ನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರ ಸಾವಿರದ ಐನೂರನೇ ಜನ್ಮದಿನಾಚರಣೆಯ ಪ್ರಯುಕ್ತ ಮಂಗಳವಾರ ನಡೆದ ʼಈದ್‌ ಮಿಲಾದ್ʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಧಕಾರದಲ್ಲಿ ದಿನದೂಡುತ್ತಿದ್ದ ಸಮಾಜದಲ್ಲಿ ಬೆಳಕು ತುಂಬಿದ ಮಹಾನ್‌ ಪುರುಷರಲ್ಲಿ ಪ್ರವಾದಿ ಮಹಮದರು ಒಬ್ಬರು. ಮಾನವರೆಲ್ಲರೂ ಸಮಾನರು ಹೀಗಾಗಿ ಬಡವ, ಬಲ್ಲಿದ, ಗುಲಾಮ ಒಡೆಯ, ಕರಿಯ ಬಿಳಿಯ ಎಂಬ ಭೇದಭಾವ ಸಲ್ಲದು ಎನ್ನುವ ಅವರ ಸಂದೇಶ ಸರ್ವಕಾಲಿಕ ಶ್ರೇಷ್ಠವಾಗಿದೆ. ಎಲ್ಲರೂ ಪರಸ್ಪರ ಪ್ರೀತಿ, ನಂಬಿಕೆಯಿಂದ ಒಂದಾಗಿ ಬಾಳಿದರೆ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆ ಬದುಕು, ಜೀವನ ನಡೆಸಲು ಸಾಧ್ಯ. ಜಾತಿ, ಮತ, ಪಂಥ, ಭೇದಭಾವ ಮರೆತು ಒಗ್ಗಟ್ಟಿನ ಮಂತ್ರ ಜಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ನರೇಗಲ್ಲನಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿಂದು ಮುಸ್ಲಿಂ ಸಮಾಜದವರು ಭಾವೈಕ್ಯತೆಯಿಂದ ಒಂದಾಗಿ ಬಾಳುತ್ತಿದ್ದಾರೆ. ಇದು ನಿರಂತರವಾಗಿ ಸಾಗಲಿ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳು, ಧರ್ಮ ಸಂಸ್ಥಾಪಕರು ಮಾನವರ ಏಳಿಗೆ ಬಗ್ಗೆ, ದಾನ ಧರ್ಮದ ಬಗ್ಗೆ, ಶಾಂತಿಯುತ, ಸೌಹಾರ್ದ ಬದುಕಿನ ಬಗ್ಗೆ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಮಕಾಂದರ, ಶಾಸಕ ಜಿ.ಎಸ್. ಪಾಟೀಲರು ಸರ್ವಸಮಾಜದ ಏಳಿಗೆಗೆ ಪಣತೊಟ್ಟಿರುವ ಬಗ್ಗೆ ಕೇಳಿ ಖುಷಿಯಾಯಿತು ಎಂದರು.

ಕಾರ್ಯಕ್ರಮದ ಆರಂಭದ ಮೊದಲು ಕಾಲ್ನಡಿಗೆ ಮೂಲಕ ರ‍್ಯಾಲಿ ನಡೆಯಿತು. ಶಾದಿ ಮಹಲ್‌ನಿಂದ ಆರಂಭವಾಗಿ ಈರಣ್ಣನ ಪಾದಗಟ್ಟಿ, ದರ್ಗಾ, ಮಾರಿಕಾಂಬ ದೇವಸ್ಥಾನ, ಹಳೇ ಬಸ್‌ ನಿಲ್ದಾಣ, ಜಕ್ಕಲಿ ಕ್ರಾಸ್‌, ಹೊಸ ಬಸ್‌ ನಿಲ್ದಾಣ, ಗದಗ ರಸ್ತೆಯ ಮಾಜಿ ಗೌಡ್ರ ಪರ್ಸ್‌, ಗ್ರಾಮ ದೇವತೆ ದೇವಸ್ಥಾನ, ಹಳೇ ಸಂತೆ ಬಜಾರ, ಪಾದಗಟ್ಟಿ ಮೂಲಕ ಆರಂಭದ ಸ್ಥಳಕ್ಕೆ ಬಂದು ತಲುಪಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ನಡೆಯಿತು. ಹಜರತ ಮೌಲಾನಾ ಅಬ್ದುಲ್‌ ವಹಾಸಾಬ್‌ ಖಾಜಿಯವರು ಧರ್ಮ ಬೋಧನೆ ನೀಡಿದರು.

ಈ ವೇಳೆ ಮುಖಂಡರಾದ ಮಿಥುನ್‌ ಜಿ. ಪಾಟೀಲ, ಕೆ. ಬಿ. ಧನ್ನೂರ, ವಿ.ಆರ್. ಗುಡಿಸಾಗರ, ಅಂಜುಮನ್‌ ಇಸ್ಲಾಂ ಕಮೀಟಿ ಅಧ್ಯ್ಷಕ ಜನಾಬ ಫಕ್ರುಸಾಬ ರೇವಡಿಗಾರ, ಕಮೀಟಿಯ ಅಧ್ಯಕ್ಷ ಖಾದರಬಾಷಾ ಹೂಲಗೇರಿ, ಮುತ್ತಪ್ಪ ನೂಲ್ಕಿ, ಗದಗ ಜಿಲ್ಲಾ ವಕ್ಫ ಬೋರ್ಡ್‌ ಉಪಾಧ್ಯಕ್ಷ ಯೂಸುಫ ಇಟಗಿ, ಶರಣಪ್ಪ ಬೆಟಗೇರಿ, ಈರಣ್ಣ ಶೆಟ್ಟರ, ಎಚ್.ಎಸ್. ಸೊಂಪೂರ, ವೀರಯ್ಯ ಸೋಮನಕಟ್ಟಿಮಠ, ವಿದ್ಯಾಧರ ದೊಡ್ಡಮನಿ, ಅಶೋಕ ಮಂದಾಲಿ, ಎ.ಎ. ನವಲಗುಂದ, ದಾವುದ ಅಲಿ ಕುದರಿ, ಬಸೀರಾಬಾನು ನದಾಫ್‌, ಮಹ್ಮದಗೌಸ್‌ ಹೊಸಮನಿ, ದಾವಲಸಾಬ ರಾಹುತ್‌, ದಾದಾಸಾಬ ಹವಾಲ್ದಾರ ಇನ್ನಿತರರು ಇದ್ದರು.

ಸೆ.೧೦-ಎನ್ಆರ್ ಜಿಎಲ್೩: ಪಟ್ಟಣದ ಮುಸ್ಲಿಂ ನೌ ಜವಾನ್‌ ಟ್ರಸ್ಟ್‌ ಕಮೀಟಿ ಮರ್ಕಜ್‌ ಹಾಗೂ ಅಂಜುಮನ್‌ ಇಸ್ಲಾಂ ಕಮೀಟಿ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರರ ಸಾವಿರದ ಐನೂರನೇ ಜನ್ಮದಿನಾಚರಣೆಯ ಪ್ರಯುಕ್ತ ಮಂಗಳವಾರ ನಡೆದ ʼಈದ್‌ ಮಿಲಾದ್ʼ ಕಾರ್ಯಕ್ರಮದಲ್ಲಿ ರೋಣ ಶಾಸಕ ಜಿ. ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

By admin

Leave a Reply

Your email address will not be published. Required fields are marked *