ಗಂಗಾವತಿ: ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ವಿವಿಧ ಕುಂದುಕೊರತೆ, ಬಹುದಿನಗಳ ಬೇಡಿಕೆ ಈಡೇರಿಸುವ ಸಂಬಂಧ ಇದೇ ಸೆಪ್ಟಂಬರ್ 20ರಂದು ಕಲಬುರಗಿಯಲ್ಲಿ ಸಭೆ ಸೇರಲು ನಿಶ್ಚಯಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎಸ್., ಹರೀಶ್ ಮತ್ತು ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿ ಹನುಮಂತ ಹಳ್ಳಿಕೇರಿ ತಿಳಿಸಿದ್ದಾರೆ.
ಕೊಪ್ಪಳ ತಾಲ್ಲೂಕಿನ ಬಸಾಪುರದ ವಿಮಾನ ನಿಲ್ದಾಣದಲ್ಲಿ ಶನಿವಾರ ಆಗಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಸಂಘದ ಉಪಾಧ್ಯಕ್ಷ ಎಚ್.ಎಸ್. ಹರೀಶ್ ಮತ್ತು ಸದಸ್ಯ ಹನುಮಂತ ಹಳ್ಳಿಕೇರಿ ನೇತೃತ್ವದಲ್ಲಿ ಜಿಲ್ಲಾಮಟ್ಟದ ದಿನಪತ್ರಿಕೆಗಳ ಸಂಪಾದಕರು ಶನಿವಾರ ಭೇಟಿ ಮಾಡಿದ್ದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಈ ಭಾಗದ 7 ಜಿಲ್ಲೆಗಳ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಪ್ರತಿ ತಿಂಗಳು 2 ಪುಟಗಳ ಜಾಹೀರಾತು ನೀಡುವ ಸಂಬಂಧ ಸಂಘದಿಂದ ಈ ಹಿಂದೆ ಮನವಿ ಸಲ್ಲಿಸಿದ್ದನ್ನು ಸಂಪಾದಕರ ಸಂಘದ ಪದಾಧಿಕಾರಿಗಳು ಕೆ.ವಿ. ಪ್ರಭಾಕರ್ ಅವರ ಗಮನಕ್ಕೆ ತಂದರು.ಕೂಡಲೇ ದೂರವಾಣಿ ಮೂಲಕ ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಜಯ್‌ಸಿಂಗ್ ಅವರಿಗೆ ಕರೆ ಮಾಡಿದ ಕೆ.ವಿ.ಪ್ರಭಾಕರ್ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಸೆಪ್ಟಂಬರ್ 17ರಂದು ಒಂದು ಪುಟ ಜಾಹೀರಾತು ಬಿಡುಗಡೆ ಮಾಡುವಂತೆ ತಿಳಿಸಿದರು.
*ಸಂಪಾದಕರೊಂದಿಗೆ ಸಭೆ* ಸಂಪಾದಕರ ಸಂಘದ ವಿವಿಧ ಬೇಡಿಕೆ ಈಡೇರಿಕೆಗೆ
ಸಂಬಂಧಿಸಿದಂತೆ ಈಗಾಗಲೇ ಸಂಘದಿಂದ ಕಳೆದ 20 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದು, ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳಿಗೆ ಮನವಿ ಕೊಡುತ್ತಲೇ ಬಂದಿದ್ದೇವೆ.
ಕಲ್ಯಾಣ ಕರ್ನಾಟಕದ ಭಾಗದ 7 ಜಿಲ್ಲೆಗಳ ಸಂಪಾದಕರ ಸಮಸ್ಯೆ, ಕುಂದುಕೊರತೆ, ಬೇಡಿಕೆಗಳನ್ನು ಆಲಿಸುವ ಸಂಬಂಧ ಸೆಪ್ಟಂಬರ್ 20ಕ್ಕೆ ಕಲಬುರಗಿಯಲ್ಲಿ ಸಭೆ ನಿಗಧಿ ಮಾಡಲಾಗಿದೆ. ಸಭೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜೆಯ್‌ಸಿಂಗ್ ಭಾಗಿಯಾಗಲಿದ್ದಾರೆ.
ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಏಳು ಜಿಲ್ಲೆಗಳ ಸಂಪಾದಕರ ಸಭೆ ಕಲಬುರಗಿಯಲ್ಲಿ ಸೆಪ್ಟಂಬರ್ 20ಕ್ಕೆ ನಡೆಯಲಿದೆ. ಹೆಚ್ಚಿನ ಪ್ರಮಾಣದ ಸಂಪಾದಕರು ಸಭೆಗೆ ಆಗಮಿಸಿ ಸೂಕ್ತ ಸಹಕಾರ ನೀಡಬೇಕೆಂದು ಹೆಚ್.ಎಸ್.ಹರೀಶ್ ತಿಳಿಸಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಭೀಮರಾಯ ಹದ್ದಿನಾಳ,
ಮಂಜುನಾಥ ಅಬ್ಬಿಗೆರೆ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ, ಖಜಾಂಚಿ ಎಸ್.ಟಿ.ವೇದಮೂರ್ತಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಹನುಮಂತ ಹಳ್ಳಿಕೇರಿ ತಿಳಿಸಿದ್ದಾರೆ.
ಕೊಪ್ಪಳದ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳಾದ ವೈ. ನಾಗರಾಜ್, ವೀರಣ್ಣ ಕಳ್ಳಿಮನಿ, ಸೀರಾಜ್ ಬೀಸರಳ್ಳಿ ಇತರರಿದ್ದರು.