ಮಾಜಿ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು, ಕರ್ನಾಟಕದಲ್ಲಿ ಖಾಲಿ ಇರುವ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಮತ್ತು ಉದ್ಯೋಗಾಕಾಂಕ್ಷಿಗಳ ಬೇಡಿಕೆಯಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಪ್ರಣಾಳಿಕೆಯ ಪುಟ ಸಂಖ್ಯೆ 47ರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ 2.5 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಸಮಯ ಕಳೆದಿದ್ದರೂ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ಪಿ. ರಾಜೀವ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ನೇಮಕಾತಿ ಅಧಿಸೂಚನೆಯನ್ನೂ ಹೊರಡಿಸಿಲ್ಲ ಎಂದು ಆರೋಪಿಸಿದರು. ಹಿಂದಿನ ಬಿಜೆಪಿ ಸರ್ಕಾರ 15,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು, ಆದರೆ ಈಗಿನ ಸರ್ಕಾರ ಕೇವಲ ನೇಮಕಾತಿ ಆದೇಶಗಳನ್ನು ನೀಡುತ್ತಿದೆ ಎಂದು ಟೀಕಿಸಿದರು.
ರಾಜ್ಯದ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ 5 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಆಗ್ರಹಿಸಿದರು.
ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಬೆಂಗಳೂರಿನಲ್ಲಿ ಎ.ಬಿ.ವಿ.ಪಿ. ಕಾರ್ಯಕರ್ತರು ಸಚಿವರ ಮನೆಗೆ ಮುತ್ತಿಗೆ ಹಾಕಿ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರದ “ಮಾತು ತಪ್ಪಿದ” ನಡೆಯ ಪ್ರತೀಕ ಎಂದು ಎಚ್ಚರಿಸಿದರು.
ಪ್ರಕರಣ ದಾಖಲಿಗೆ ಆಕ್ರೋಶ: ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ಪ್ರಕರಣಗಳನ್ನು ದಾಖಲಿಸಿರುವುದು ಸರ್ಕಾರದ “ಅತ್ಯಂತ ಅಮಾನವೀಯ ನಡೆ” ಎಂದು ಪಿ. ರಾಜೀವ್ ಆಕ್ಷೇಪ ವ್ಯಕ್ತಪಡಿಸಿದರು. ಒಮ್ಮೆ ಕೇಸು ದಾಖಲಾದರೆ ಆ ವಿದ್ಯಾರ್ಥಿಯ ಸಿಂಧುತ್ವಕ್ಕೆ ತೊಂದರೆ ಆಗುತ್ತದೆ. ಮನುಷ್ಯತ್ವ ಇರುವ ಸರ್ಕಾರ ಈ ರೀತಿ ಮಾಡುವುದಿಲ್ಲ.
ಕೇಸು ವಾಪಸ್‌ಗೆ ಆಗ್ರಹ: ತಕ್ಷಣವೇ ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ಮೊಕದ್ದಮೆ ದಾಖಲಿಸಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿರುವ ಪ್ರಮುಖ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಿದ ಅವರು, ಶಿಕ್ಷಣ ಇಲಾಖೆಯಲ್ಲಿ 70,727 ಶಿಕ್ಷಕರ ಹುದ್ದೆಗಳು ಮತ್ತು ಗೃಹ ಇಲಾಖೆಯಲ್ಲಿ 25,000 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ರಾಹುಲ್ ಗಾಂಧಿಗೆ ಸವಾಲು: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ನಿರುದ್ಯೋಗ ಮತ್ತು ‘ಜೆನ್-ಝಡ್’ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಅವರು ಕರ್ನಾಟಕದಲ್ಲಿರುವ ಅವರದೇ ಸರ್ಕಾರದ ನಿರುದ್ಯೋಗ ಸಮಸ್ಯೆ ಮತ್ತು ಅರಾಜಕತೆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದರು.
ಧಾರವಾಡದಲ್ಲಿ ಪದವೀಧರರು ನಡೆಸಿದ ಹೋರಾಟ ಮತ್ತು ಬೆಂಗಳೂರಿನಲ್ಲಿ ಸಚಿವರಿಗೆ ಹಾಕಿರುವ ಮುತ್ತಿಗೆಯು ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿಗಳು ನೀಡಿರುವ ಎಚ್ಚರಿಕೆ ಘಂಟೆ ಎಂದು ಸರ್ಕಾರ ಭಾವಿಸಬೇಕು ಎಂದು ಪಿ. ರಾಜೀವ್ ಎಚ್ಚರಿಕೆ ನೀಡಿದ್ದಾರೆ.